ಸ್ವಾಮಿ ವಿವೇಕಾನಂದರು ಪರಿಪೂರ್ಣ
ವ್ಯಕ್ತಿತ್ವದ ಸಾಕಾರ ಮೂರ್ತಿಯಾಗಿದ್ದಾರೆ.ಅವರ
ಜೀವನ ಪ್ರತಿಯೊಬ್ಬರ ಬದುಕಿಗೆ ನವಚೈತನ್ಯ
ತುಂಬುವ ಸ್ಫೂರ್ತಿಧಾರೆಯಾಗಿದೆ.ನಿಸ್ತೇಜನಾದ
ಯಾವುದೇ ವ್ಯಕ್ತಿಯ ಬದುಕಿನ ಅಂಧಕಾರವನ್ನು
ಹೋಗಲಾಡಿಸಿ,ಹೊಸ ಬೆಳಕಿನತ್ತ ಕೊಂಡೊಯ್ಯುವ
ಶಕ್ತಿಯ ಚಿಲುಮೆಯಾಗಿದೆ.
ಸ್ವಾಮಿ ವಿವೇಕಾನಂದರು ಕ್ರಿಸ್ತಶಕ ೧೮೬೩
ಜನವರಿ ೧೨ರಂದು ವಿಶ್ವನಾಥದತ್ತ ಮತ್ತು ಭುವನೇಶ್ವರಿ
ದೇವಿಯರ ಸುಪುತ್ರರಾಗಿ ಕಲ್ಕತ್ತಾದಲ್ಲಿ ಜನಿಸಿದರು.
ನರೇಂದ್ರ ನೆರೆಹೊರೆಯವರೊಂದಿಗೆ,ಬಂಧುಗಳೊಂದಿಗೆ
ಪ್ರೀತಿಯಿಂದ ಬೆರೆಯುವ ಬಾಲಕನಾಗಿದ್ದ.ಪ್ರಾಣಿ
ಪಕ್ಷಿಗಳೆಂದರೆ ಅವನಿಗೆ ಅತೀವವಾದ ಪ್ರೇಮವಿತ್ತು.
ತುಂಟತನವೂ ಅವರ ಸ್ವಭಾವವಾಗಿದ್ದು,ಅಂಜಿಕೆ,
ಬೆದರಿಕೆಗಳಿಗೆ ತಗ್ಗುತ್ತಿರಲಿಲ್ಲ.ಅವರಿಗೆ ಎಂಟುವರ್ಷ
ತುಂಬಲು,ಈಶ್ವರ ಚಂದ್ರ ವಿದ್ಯಸಾಗರರ ಶಾಲೆಗೆ
ಸೇರಿಸಿದರು.ತನ್ನ ಬುದ್ಧಿಕೌಶಲ್ಯದಿಂದ ಅಲ್ಲಿನ
ಉಪಾಧ್ಯಾಯರೆಲ್ಲರಿಗೂ ಪ್ರಿಯ ವಿದ್ಯಾರ್ಥಿಯಾದರು.
ಕ್ರೀಡೆಯಲ್ಲಿಯೂ ಅವರು ಅತ್ಯಂತ ಚುರುಕಾಗಿದ್ದರು.
ಹೊಸಹೊಸ ಆಟಗಳನ್ನು ಕಂಡುಹಿಡಿದು,ಸ್ನೇಹಿತರನ್ನು
ಸಂತೋಷಪಡಿಸುತ್ತಿದ್ದರು.ಕಾಲೇಜಿಗೆ ಸೇರಿದ ಮೇಲೆ
ವಿಚಾರ ಪ್ರಚೋದಕ ಪುಸ್ತಕಗಳು,ವೃತ್ತ ಪತ್ರಿಕೆಗಳನ್ನು
ಓದಲಾರಂಭಿಸಿದರು.ಸಾಹಿತ್ಯ, ಇತಿಹಾಸ, ಖಗೋಳ
ಶಾಸ್ತ್ರ, ತತ್ವ ಶಾಸ್ತ್ರ, ತರ್ಕ ಮುಂತಾದ ವಿಷಯಕ್ಕೆ
ಸಂಬಂಧಿಸಿದ ಪುಸ್ತಕಗಳನ್ನು ಓದುತ್ತಿದ್ದರು.ಹಾಗೆಯೇ
ಅವರ ವಾಕ್ಚಾತುರ್ಯದಿಂದ ಎಲ್ಲರನ್ನೂ ಮಂತ್ರ
ಮುಗ್ಧಗೊಳಿಸುತ್ತಿದ್ದರು.ಕ್ರಮೇಣ ಅವರ ಜೀವನದಲ್ಲಿ
ಆಧ್ಯಾತ್ಮಿಕ ತೃಷೆ ಹೆಚ್ಚಾಗತೊಡಗಿತು.ಒಮ್ಮೆ ಅವರು
ಕೆಲವು ಸ್ನೇಹಿತರೊಡನೆ ಶ್ರೀ ರಾಮಕೃಷ್ಣರನ್ನು ನೋಡಲು ದಕ್ಷಿಣೇಶ್ವರಕ್ಕೆ ಹೋಗುತ್ತಾರೆ. ಅವರಿಂದ
ಪ್ರಭಾವಿತರಾಗಿ ಅವರ ಶಿಷ್ಯರಾಗುತ್ತಾರೆ.
ವಿಶ್ವನಾಥದತ್ತರ ಆಕಸ್ಮಿಕ ಮರಣದಿಂದ
ಕುಟುಂಬದ ಜವಾಬ್ದಾರಿ ನರೇಂದ್ರರರು ನಿಭಾಯಿಸ
ಬೇಕಾದ ಪರಿಸ್ಥಿತಿ ಎದುರಾಯಿತು. ಸಂಸಾರ ಜೀವನದಲ್ಲಿ ನಿರಾಸಕ್ತಿ ಹೊಂದಿದ್ದ ಅವರು ಸನ್ಯಾಸಿ
ಗಳಾಗಲು ನಿರ್ಧರಿಸುತ್ತಾರೆ. ಶ್ರೀರಾಮಕೃಷ್ಣರ
ಮರಣದ ನಂತರ ಸನ್ಯಾಸದೀಕ್ಷೆ ಸ್ವೀಕರಿಸುತ್ತಾರೆ.
ವಿದೇಶಕ್ಕೆ ಹೊರಡುವ ಮುನ್ನ ವಿವೇಕಾನಂದ
ಎಂಬ ಹೆಸರನ್ನು ಇಟ್ಟುಕೊಂಡರು.ಕಾಶಿಯಿಂದ
ಕನ್ಯಾಕುಮಾರಿಯವರೆಗೂ ಭಾರತದ ಉದ್ದಗಲಕ್ಕೆ
ಸಂಚರಿಸಿ ತಮ್ಮ ಜ್ಞಾನದ ಸಾರವನ್ನು ಹರಡಿದರು.
೧೧-೦೯-೧೮೯೩ರಂದು ಚಿಕಾಗೋ ಸರ್ವಧರ್ಮ
ಸಮ್ಮೇಳನದಲ್ಲಿ ಮಾತನಾಡುತ್ತಾ ಅವರು "ಸ್ವಮತಾ
ಭಿಮಾನ,ಅನ್ಯಮತದ್ವೇಷ ಮತ್ತು ಇವುಗಳಿಂದ
ಉತ್ಪನ್ನವಾದ ಘೋರ ಧಾರ್ಮಿಕ ದುರಭಿಮಾನಗಳು
ಈ ಸುಂದರ ಜಗತ್ತನ್ನು ಆವರಿಸಿಕೊಂಡಿವೆ..ಇಂತಹ
ಉಗ್ರ ಧರ್ಮಾಂಧತೆಯ ದೈತ್ಯರಿಲ್ಲದೇ ಇದ್ದರೆ
ಮಾನವ ಜನಾಂಗ ಇಂದಿಗಿಂತ ಎಷ್ಟೋ ಮುಂದು
ವರೆಯುತಿತ್ತು"ಎಂದರು.
ಕುವೆಂಪು ಅವರು ಹೇಳುವಂತೆ ಅವರು
ಮಾನವತಾ ಮಿತ್ರರಾಗಿದ್ದರು.ಅವರಿಂದ ಇಂದಿನ
ಯುವಜನತೆ ಕಲಿಯಬೇಕಾದ ಬಹುಮುಖ್ಯ
ಮೌಲ್ಯವೆಂದರೆ ಮನುಷ್ಯತ್ವ."ಮನುಷ್ಯತ್ವದ
ಮಹಿಮೆಯನ್ನು ಎಂದಿಗೂ ಮರೆಯಬೇಡಿ"
ಎಂದು ಘೋಷಿಸಿದರು.ದೀನದಲಿತರ ಉದ್ಧಾರವೇ
ಅವರ ಮೊದಲ ಆದ್ಯತೆಯಾಗಿತ್ತು.ಹಿಂದುಳಿದ
ವರ್ಗಗಳ ಬಗ್ಗೆ ಅವರಿಗೆ ಸಾಮಾಜಿಕ ಕಳಕಳಿಯಿತ್ತು.
ಜಾತಿವ್ಯವಸ್ಥೆಯನ್ನು ವಿರೋಧಿಸಿದರು.ಬಡವರ
ಹೊಟ್ಟೆ ಹಸಿವನ್ನು ಹಿಂಗಿಸಬೇಕು ಎಂದು ಹೇಳಿದರು.
"ಶಕ್ತಿಯೇ ಜೀವನ;ದೌರ್ಬಲ್ಯವೇ ಮರಣ",
"ಏಳಿ,ಎದ್ದೇಳಿ ಗುರಿ ಮುಟ್ಟುವವರೆಗೂ ನಿಲ್ಲದಿರಿ"
ಎಂದು ಭಾರತದ ಯುವಶಕ್ತಿಗೆ ಕರೆ ನೀಡಿದರು.
"ಭವಿಷ್ಯ ಭಾರತದ ನಿರ್ಮಾಣವು ತಮ್ಮ ಕಾಯಕವನ್ನು
ಆಧರಿಸಿದೆ", ಸ್ತ್ರೀಯರ ಸ್ಥಾನಮಾನವನ್ನು ಉನ್ನತೀಕರಿಸಿದರೆ ಮಾತ್ರ ಅವರ ಮಕ್ಕಳು ಉದಾತ್ತ
ಉನ್ನತ ಕಾರ್ಯಗಳಿಂದ ದೇಶದ ಹೆಸರನ್ನು
ಉಜ್ವಲಗೊಳಿಸುತ್ತಾರೆ; ಆಗ ಸಂಸ್ಕೃತಿ, ಜ್ಞಾನ, ಶಕ್ತಿ
ಮತ್ತು ಭಕ್ತಿ ಇವು ದೇಶದಲ್ಲಿ ಜಾಗೃತವಾಗುತ್ತವೆ
ಎಂಬ ಮಹತ್ವದ ಸಂದೇಶ ನೀಡಿದರು.
ಸ್ವಾಮಿ ವಿವೇಕಾನಂದರು ತಮ್ಮ ಮೂವತ್ತೊಂಬತ್ತನೇ ವಯಸ್ಸಿನಲ್ಲಿ ಪ್ರಾಣತ್ಯಾಗ
ಮಾಡಿದರು.ಇಷ್ಟು ಚಿಕ್ಕ ಜೀವನದಲ್ಲಿ ಅವರು
ಮಾಡಿದ ಸಾಧನೆ ಯುವಜನತೆಗೆ ಒಂದು
ರೋಮಾಂಚನಕಾರಿ ಅಧ್ಯಾಯವಾಗಿದೆ.
ಭಾರತದ ಯುವಶಕ್ತಿ ವಿವೇಕಾನಂದರ ತತ್ವಗಳನ್ನು
ಜೀವನದಲ್ಲಿ ಅಳವಡಿಸಿಕೊಂಡಾಗ ಭವ್ಯ ಭಾರತ
ನಿರ್ಮಾಣದ ಅವರ ಕನಸು ಖಂಡಿತವಾಗಿಯೂ
ನನಸಾಗುತ್ತದೆ.
- ಭವ್ಯ ಟಿ.ಎಸ್.
ಶಿಕ್ಷಕರು.ಹೊಸನಗರ
ಶಿವಮೊಗ್ಗ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)